ಹಾಸನ, ಮೇ ೨೭, ೨೦೧೭: ಮುಂದಿನ ವರ್ಷ ನಡೆಯಲಿರುವ ಶ್ರವಣ ಬೆಳಗೊಳದ ಮಹಾ ಮಸ್ತಕಾಭಿಷೇಕದ ಮೇಲೆ ವಿಧಾನಸಭæ ಚುನಾವಣೆಯ ಋುಣಾತ್ಮಕ ಪರಿಣಾಮಗಳು ಬೀರುವ ಆತಂಕ ಎದುರಾಗಿದೆ.

2018ರಲ್ಲೇ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗುವುದರಿಂದ 45 ದಿನದ ಮುನ್ನವೇ ನೀತಿ ಸಂಹಿತೆ ಜಾರಿಯಾಗಿ, ಅಧಿಕಾರಿಗಳು ಚುನಾವಣೆಯತ್ತ ಮುಖ ಮಾಡಿದರೆ ಮಸ್ತಕಾಭಿಷೇಕ ಸಾಂಗವಾಗಿ ನಡೆಸುವುದು ಹೇಗೆ ಎಂಬ ಆತಂಕ ಮಠದ ಭಕ್ತರನ್ನು ಕಾಡಲಾರಂಭಿಸಿದೆ.

ಬಾಹುಬಲಿ ಮಹಾಮಜ್ಜನಕ್ಕೆ ಬೆರಳೆಣಿಕೆ ತಿಂಗಳಷ್ಟೇ ಬಾಕಿ ಇದ್ದರೂ, 11 ಉಪನಗರ ಸ್ಥಾಪನೆಗೆ ಸ್ಥಳ ಗುರುತಿಸುವ, ಬೆಳೆ ಹಾಗೂ ಭೂಮಿ ಪರಿಹಾರ ನಿಗದಿ ಸೇರಿದಂತೆ ಹಲವು ಪ್ರಮುಖ ಕೆಲಸಗಳಿಗೆ ಇನ್ನೂ ಚಾಲನೆ ನೀಡಿಲ್ಲ.

ಜಗದ್ವಿಖ್ಯಾತ ಮಸ್ತಕಾಭಿಷೇಕಕ್ಕೆ ರಾಜ್ಯ, ಹೊರರಾಜ್ಯ ಸೇರಿದಂತೆ ದೇಶದ ನಾನಾ ಮೂಲೆಯಿಂದ ಹಾಗೂ ವಿದೇಶ ಸೇರಿದಂತೆ ಈ ಬಾರಿ ಒಂದು ಕೋಟಿ ಜನತೆ ಬರುವ ನಿರೀಕ್ಷೆ ಇದೆ. ಜೈನಮುನಿಗಳು, ಭಕ್ತರು ತಂಗಲು 11 ಉಪನಗರವನ್ನು ಶ್ರವಣಬೆಳಗೊಳ ಸುತ್ತ ನಿರ್ಮಿಸಬೇಕಿದ್ದು, ಇದಕ್ಕಾಗಿ ಸೂಕ್ತ ಪರಿಹಾರದೊಂದಿಗೆ ರೈತರಿಂದ ಕೃಷಿ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕಿದೆ. ಈ ಎಲ್ಲ ಪ್ರಕ್ರಿಯೆ ತಿಂಗಳು, ಎರಡು ತಿಂಗಳಲ್ಲಿ ಮುಗಿಯುವುದಲ್ಲ. ಪ್ರಸ್ತುತ ರೈತರಿಗೆ ನೋಟಿಸ್‌ ನೀಡಿರುವುದನ್ನು ಹೊರತುಪಡಿಸಿದರೆ, ಬೆಳೆ ಪರಿಹಾರ, ಎರಡು ವರ್ಷದ ಭೂ ಪರಿಹಾರ ನಿಗದಿಯೇ ಆಗಿಲ್ಲ ಎಂಬ ಬೇಸರದ ಮಾತುಗಳು ಕೇಳಿಬರುತ್ತಿವೆæ.

ವಿವಿಐಪಿಗಳಿಗೆ ವಿಶೇಷ, ಆಧುನಿಕ ಸೌಲಭ್ಯದ ಕೊಠಡಿ ನಿರ್ಮಾಣ, ವೀಕ್ಷಣಾ ಗ್ಯಾಲರಿಯಂತಹ ಪ್ರಮುಖ ಶಾಶ್ವತ ಕಾಮಗಾರಿಗಳು, ಇನ್ನಿತರ ಅಭಿವೃದ್ಧಿ ಕೆಲಸ, ಮೂಲ ಸೌಲಭ್ಯ ಹೀಗೆ ಪಟ್ಟಿ ಮಾಡುತ್ತ ಹೋದರೆ ಬಾಹುಬಲಿಯಷ್ಟೇ ಎತ್ತರಕ್ಕೆ ಬೆಳೆಯುತ್ತದೆ. ಮುಖ್ಯಮಂತ್ರಿ ಬೆಳಗೊಳಕ್ಕೆ ಬಂದು ಹೋದ ಬಳಿಕ ಕಾಮಗಾರಿ ವೇಗ ಪಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಎಲ್ಲವೂ ಆಮೆವೇಗದಲ್ಲೇ ನಡೆಯುತ್ತಿದೆ ಎನ್ನುತ್ತಾರೆ ಮಠದ ಭಕ್ತರು.

2006ರಲ್ಲಿ ಮೇ ವೇಳೆಗಾಗಲೇ ಅಟ್ಟಣಿಗೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿತ್ತು. ಆದರೆ ಈ ಬಾರಿ ಪ್ರಸ್ತುತ ಟೆಂಡರ್‌ ಪ್ರಕ್ರಿಯೆ ಆಗಿಲ್ಲ. ಟೆಂಡರ್‌ ಪ್ರಕ್ರಿಯೆಗೆ ಕನಿಷ್ಠ 60 ದಿನ ಬೇಕು. ರಾಜ್ಯ ಸರಕಾರ 175 ಕೋಟಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನು ಬಿಟ್ಟರೆ ಹಣ ಅಧಿಕಾರಿಗಳ ಕೈಸೇರದೆ ಎಲ್ಲ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಸಾಧಕ-ಬಾಧಕ

ಈ ಬಾರಿಯ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವವರಿಗೆ ಉಳಿದುಕೊಳ್ಳಲು ಹೋಂ ಸ್ಟೇ ಮಾದರಿ ಗ್ರಾಮೀಣ ಪ್ರದೇಶದ ಮನೆಗಳನ್ನು ಒದಗಿಸಿಕೊಡುವ ಚಿಂತನೆ ನಡೆದಿದೆ. ಇದಕ್ಕಾಗಿ ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಪ್ರಾರಂಭಿಸಿದ್ದಾರೆ. ಈ ಪ್ರಕ್ರಿಯೆ ನಡುವೆ ಈ ಚಿಂತನೆ ಯಶಸ್ವಿಯಾಗುವುದೇ ಎಂಬ ಅನುಮಾನವೂ ಹಲವರನ್ನು ಕಾಡುತ್ತಿದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಶೌಚಾಲಯ, ಪ್ರತ್ಯೇಕ ಕೊಠಡಿ, ನೀರು ಸೇರಿದಂತೆ ಮೂಲ ಸೌಲಭ್ಯಗಳು ಇರುತ್ತವೆಯೇ? ಆಹಾರ ಪದ್ಧತಿ ರುಚಿಸುತ್ತದೆಯೇ? ಇತ್ಯಾದಿ ಪ್ರಶ್ನೆಗಳು ಉದ್ಭವವಾಗಿದೆ.

ಗೊಂದಲ

ಮಸ್ತಕಾಭಿಷೇಕದ ಇತಿಹಾಸದಲ್ಲಿ ಪ್ರಥಮ ಬಾರಿ ಅಧ್ಯಕ್ಷರ ಜತೆ ಸಹ ಅಧ್ಯಕ್ಷರು, ವಿಶೇಷ ಅಧಿಕಾರಿ ಜತೆ ಮಗದೊಂದು ಹೊಸ ಹುದ್ದೆ ಸೃಷ್ಟಿಸಿ ನಿಯೋಜಿಸಿರುವುದು ಗೊಂದಲ ಸೃಷ್ಟಿಸಿದೆ. ಅಪರ ಜಿಲ್ಲಾಧಿಕಾರಿ ಜಾನಕಿಯವರನ್ನು ನೇಮಿಸಿದೆ. ವಿಶೇಷ ಅಧಿಕಾರಿ ಎಂದು ಮಗದೊಂದು ಹುದ್ದೆ ಸೃಷ್ಠಿಸಿ ವರಪ್ರಸಾದರೆಡ್ಡಿಯನ್ನು ನಿಯೋಜಿಸಿದೆ. ಯಾರಾರ‍ಯರ ಕರ್ತವ್ಯ ಏನು ಎಂಬುದೇ ಗೊಂದಲವಾಗಿದೆ. ಹೀಗಾದರೆ ನಾವಾದರೂ ಏನು ಮಾಡುವುದು? ಯಾರನ್ನು ಕೇಳುವುದು ಎಂಬ ಸಮಸ್ಯೆ ಸೃಷ್ಟಿಯಾಗಿದೆ ಎಂಬ ಅಸಮಾಧಾನವೂ ಕಾಣುತ್ತಿದೆ.

ಬೆಳಗೊಳದಲ್ಲಿ ನಡೆಯಲಿರುವ ಮಸ್ತಕಾಭಿಷೇಕಕ್ಕೆ ಒಂಬತ್ತು ತಿಂಗಳು ಬಾಕಿ ಇದೆ. ಹತ್ತು ಹಲವು ಪ್ರಮುಖ ಯೋಜನೆಗಳು ಅನುಷ್ಠಾನವಾಗಬೇಕಿದೆ. ಅದರ ನಡುವೆ ಅನೇಕ ಗೊಂದಲಗಳು ಮೂಡಿವೆ. 270 ಕೋಟಿ ವೆಚ್ಚದಲ್ಲಿ ಜಿಲ್ಲಾದ್ಯಂತ ರಸ್ತೆಗಳು ಅಭಿವೃದ್ಧಿ ಹೊಂದಬೇಕಿದೆ. ಮಳೆಗಾಲವೂ ಪ್ರಾರಂಭಗೊಂಡಿರುವುದರಿಂದ ಕಾಮಗಾರಿ ಬಗ್ಗೆ ಬೇಸರ ಮೂಡಿದೆ.

ಜಿಲ್ಲಾಡಳಿತ 11 ಉಪನಗರಕ್ಕೆ 282 ಎಕರೆ ಗುರುತಿಸಿದೆ. ಎಸಿ ದರ ನಿಗದಿಪಡಿಸಿದ್ದಾರೆ. ಎರಡು ಕೋಟಿ ರೂ. ಅವರ ಬಳಿ ಇದೆ. ಸರಕಾರದಿಂದ ಅಗತ್ಯ ಆರ್ಥಿಕ ನೆರವು ಬಂದ ಕೂಡಲೇ ಎಲ್ಲ ಕಾಮಗಾರಿಯೂ ನಡೆಯುತ್ತವೆ. ಸಿದ್ಧತೆಯ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ನೀಡಲಾಗುತ್ತಿದೆ. ಏನೇ ಚುನಾವಣೆ ನಡೆದರೂ, 45 ದಿನ ಮುನ್ನವೇ ನೀತಿ ಸಂಹಿತೆ ಜಾರಿಯಾಗುತ್ತದೆ. ಒಂದು ಪಕ್ಷ ಅಡ್ಡಿಯಾದರೂ, ಚುನಾವಣಾ ಆಯೋಗದಿಂದ ಅನುಮತಿ ಪಡೆಯಲು ಅವಕಾಶವಿದೆ. ಈ ಬಗ್ಗೆ ಆತಂಕ ಬೇಡ.

-ಚೈತ್ರಾ, ಜಿಲ್ಲಾಧಿಕಾರಿ ಹಾಸನ

ಕೇಂದ್ರ ಅನುದಾನ ನೀಡಲಿ, ಬಿಡಲಿ ರಾಜ್ಯ ಸರಕಾರ ಮಸ್ತಕಾಭಿಷೇಕ ಯಶಸ್ವಿಗೆ ಸರ್ವ ಸನ್ನದ್ಧವಾಗಿದೆ. ತಂತ್ರಜ್ಞಾನ ಮುಂದುವರೆದಿದ್ದು, ವಿಳಂಬವಾಗದಂತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿದೆ. ಈಗಾಗಲೇ ಸಾಕಷ್ಟು ಸಭೆ ನಡೆಸಿ ಚರ್ಚೆಸಿದ್ದೇವೆ. ಸಿಎಂ ಕೂಡ ಉತ್ಸುಕರಾಗಿದ್ದಾರೆ.

-ಎ.ಮಂಜು ರೇಷ್ಮೆ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಸನ

ಭದ್ರತೆ ಕಾರಣದಿಂದ ಮಸ್ತಕಾಭಿಷೇಕದ ವೇಳೆ ಬೆಳಗೊಳದ ಎರಡು ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕ ವಾಹನಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಅಧಿಕಾರಿಗಳು, ಗಣ್ಯರಿಗೆ ಮಹತ್ವ ನೀಡಲಾಗುತ್ತದೆ. ಹೀಗಿರುವಾಗ ಹೊಂ ಸ್ಟೇ ಮಾಡಿದರೆ ಮತ್ತೆಲ್ಲಿಗೂ ಬೇಡ ಸಮೀಪದ ಸುಂಡಳ್ಳಿಗೆ ಹೋಗಿ ಬರಲು ಸಾಧ್ಯವಿಲ್ಲ. ಅದೇಕೋ ಗೊತ್ತಿಲ್ಲ ಹಿಂದಿನ ಮಸ್ತಕಾಭಿಷೇಕ ಗಮನಿಸಿದರೆ ಈ ಬಾರಿ ಅಷ್ಟು ವೇಗ ಕಾಣುತ್ತಿಲ್ಲ.

-ಮಹಾವೀರ್‌ ಜೈನ್‌ ಬೆಳಗೊಳ

ಹೊಂಸ್ಟೇ ಮಾಡುವುದು ಭದ್ರತೆ ಮತ್ತಿತರ ವಿಷಯದಲ್ಲಿ ಕಷ್ಟವಾಗಬಹುದು. ಈ ವಿಷಯ ಸ್ವಾಮೀಜಿಗಳ ಬಳಿಯೂ ಚರ್ಚೆ ಆಗಿಲ್ಲ. ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಗಳೆಲ್ಲ ಸರಕಾರದ ಮಟ್ಟದಲ್ಲಿ ನಡೆಯುತ್ತಿವೆ. ನಿಗದಿತ ಸಮಯದಲ್ಲಿ ಎಲ್ಲವೂ ನಡೆದು, ಸಮಸ್ಯೆಯಾಗದು ಎಂಬ ಭರವಸೆ ಇದೆ.

-ಜಿತೇಂದ್ರ ಕುಮಾರ್‌ ಕಾರ್ಯಾಧ್ಯಕ್ಷರು ಮಸ್ತಕಾಭಿಷೇಕ ಮಹೋತ್ಸವ ಸಮಿತಿ